Friday, November 22, 2013

"ದೀಪಾವಳಿ"


"ದೀಪಾವಳಿ" ಅನ್ನೋದು ಸಂಸ್ಕೃತ ಮೂಲದ ಶಬ್ದ. ದೀಪಾವಳಿ ಅನ್ನೋ ಶಬ್ದವು.. ದಿನಗಳು, ತಿಂಗಳುಗಳು, ವರ್ಷಗಳು ಕಳೆದ ಹಾಗೆ "ದಿವಾಳಿ" ಆಗಿ ಬದಲಾಯಿತು . ಎಂತಹ ಸಾಮಾನ್ಯ ಜ್ಞ್ಯಾನ ಇರುವವರಿಗೂ ಪದಗಳ ಅರ್ಥವಾಗುತ್ತೆ. ಹಾಗೇನೆ ದೀಪಾವಳಿ ಅಂದ್ರೆ ಬೆಳಕಿನ ಹಬ್ಬ ಮತ್ತು ದಿವಾಳಿ ಅಂದ್ರೆ ಎಲ್ಲವನ್ನು ಕಳೆದುಕೊಂಡವ ( ಉದಾ : ಮಾತನಾಡುವಾಗ ಸಹಜವಾಗಿ ಹೆಳೋದು ಅವನು ಪೂರ್ತಿ ದಿವಾಳಿ ಆಗಿದ್ದಾನೆ ಅಂತ ). ಅದಕ್ಕಾಗಿ "ದೀಪಾವಳಿ" ಹಬ್ಬವನ್ನು"ದಿವಾಳಿ" ಅನ್ನದೆ ದೀಪಾವಳಿ ಅಂತಾನೆ ಉಚ್ಚರಿಸೋಣ. 

ತುಂಬಾ ಜನ ದೀಪಾವಳಿ ಇರೋದೇ ದಿವಾಳಿ ಎಬ್ಬಿಸೋಕೆ ಅಂತಾರೆ. ಯಾಕೆ ಅಂದ್ರೆ ಹಬ್ಬಕ್ಕೆ ನಾವು ಅಷ್ಟೊಂದು ಖರ್ಚು-ವೆಚ್ಚ ಮಾಡ್ತಿದ್ದೇವೆ. ಹಬ್ಬದಿಂದ ಸಂತೋಷ, ನೆಮ್ಮದಿ ಸಿಗದೇ..... ಸಾಲ-ಸೊಲ ಜೊತೇಲಿ ಸಿಟ್ಟು ಮತ್ತು ಬೇಜಾರುಗಳು ನಮ್ಮದಾಗುತ್ತಿವೆ. 

ಹಿಂದಿನ ಕಾಲದಲ್ಲಿ ನಮ್ಮ ಹಿರಿಯರುಗಳು ವರ್ಷದಲ್ಲಿ ಬರೊ ದೊಡ್ಡ ಹಬ್ಬಗಳಿಗೆ ಮಾತ್ರ ಮನೆ ಮಂದಿಗೆಲ್ಲ ಬಟ್ಟೆ, ಇತ್ಯಾದಿ ಖರೀದಿ ಮಾಡ್ತಾ ಇದ್ರೂ . ಆದ್ರೆ ಇಂದು ನಮಗೆ ಖರೀದಿಗೆ ಹಬ್ಬಗಳೆ ಬೇಕಂತಿಲ್ಲ, Mall ಸಂಸ್ಕೃತಿ ಬಂದಾಗಿನಿಂದಲೂ ವಾರದ ಕೊನೆಯಲ್ಲಿ ಹಬ್ಬಕ್ಕಿಂತ ಜಾಸ್ತಿ ಖರ್ಚು ಮಾಡ್ತಿದ್ದೇವೆ. ಜೊತೆಗೆ ಹಬ್ಬಗಳು ಬಂದಾಗ ಡಿಸ್ಕೌಂಟ್ ಸೇಲ್ ಅದು-ಇದು ಅಂತ ಮತ್ತಷ್ಟು ಜಾಸ್ತಿ ಖರ್ಚು ಮಾಡ್ತಿದ್ದೇವೆ... ಹೀಗಾದಾಗ ಸಹಜವಾಗಿ ದುಡಿಯುವ ಕೈಗಳಿಗೆ ದುಡಿದೆ ಮನೆಲ್ಲಿ ಕೂತು ಖರ್ಚು ಮಾಡೊ ಕೈಗಳಿದ್ದಾಗ ದೀಪಾವಳಿ-ದಿವಾಳಿ ಅನ್ನಿಸದೆ ಮತ್ತೇನು ತಾನೆ ಅನಿಸುತ್ತೆ. ಅದಕ್ಕಾಗಿ ಹಬ್ಬ ಹರಿದಿನಗಳು ನಮ್ಮ ಹುಚ್ಚಾಪಟ್ಟೆ ಖರ್ಚಿನಿಂದ ಮಹತ್ವ ಕಳೆದುಕೊಳ್ಳದೆ ಇರಲಿ.. 

ದುಡಿಯುವ ಕೈಗಳ ಜೊತೆ ಸರಿಯಾಗಿ ಯೋಚನೆ ಮತ್ತು ಯೋಜನೆ ಮಾಡುವ ತಲೆಯು ನಮ್ಮದಾಗಿರಬೇಕು, ಹಾಗಾದಾಗ ಮಾತ್ರ ಹಬ್ಬ ಮನಸ್ಸಿಗೆ ಸಂತೋಷ ಮತ್ತು ನೆಮ್ಮದಿ ತರಬಲ್ಲದು. 

ನಮ್ಮ ಮನೆ ಮತ್ತು ಮನಸ್ಸು ಸದಾ ಬೆಳಕಿನಿಂದ ಬೆಳಗಲಿ.. 

ಭಾರತ - ಸ್ತ್ರೀ - ಅತ್ಯಾಚಾರ



ಅತ್ಯಾಚಾರದ ಸುದ್ದಿ ಕೇಳಿದರೆ ಸಾಕು, ಮನಸ್ಸಿಗೆ ಬೇಜಾರು ಮತ್ತೆ ನೋವುಂಟಾಗುತ್ತದೆ.. ನಾವೂ  ನಿಜವಾಗಲೂ ಭಾರತ ಮಾತೆಯ ಮಡಿಲಲ್ಲಿ ಬೆಳೆದ ಹೆಣ್ಣು ಮಕ್ಕಳಿಗೆ, ನಮ್ಮ ದೇಶದ ಸಮಾಜ ಕೊಡುತ್ತಿರುವ  ಗೌರವದ ಬಗ್ಗೆ ಮನಸ್ಸಿನಲ್ಲಿ ಹೇಸಿಗೆ ಮೂಡುತ್ತಾ ಇದೆ. ಎಲ್ಲರ ಮನಸ್ಸಿನ ಮೂಲೆಯಲ್ಲಿ ಹತಾಶೆ ಮೂಡುತ್ತಲೆ ಇದೆ, ಯಾಕೆ ಅಂದ್ರೆ ದಿನದಿಂದ ದಿನಕ್ಕೆ ಸ್ತ್ರೀ ಅತ್ಯಾಚಾರದ ಪ್ರಕರಣಗಳು ಜಾಸ್ತಿ ಆಗ್ತಾನೆ ಇವೆ ಇದನ್ನ  ತಡಿಲಿಕ್ಕೆ ಆಗೋದೇ ಇಲ್ವಾ ? ಅಂತ ಅನಿಸ್ತಾ ಇದೆ. ಮಠಪತಿಗಳಿಂದ ಹಿಡಿದು ಮಂತ್ರಿಯವರೆಗೆ, ನವಯುವಕರಿಂದ ಹಿಡಿದು ಮುದುಕರು, ನಡೆಸುವ ಅತ್ಯಾಚಾರ ಎಲ್ಲ ಸ್ಥರದಲ್ಲಿ ಎಲ್ಲಾ ಕಡೆಯಲ್ಲೂ ನಡೀತಾನೆ ಇದೆ!!  ಇಂತಹ ನೀಚರ ಬಗ್ಗೆ ಒಳ್ಳೆಯ ಮನಸ್ಕರಲ್ಲೂ ಆಕ್ರೋಶ ಮೂಡುವುದರಲ್ಲಿ ಸಂದೇಹವೇ ಇಲ್ಲದಾಗಿ ಹೋಗಿದೆ. ಪ್ರತಿ ದಿನ ದೇಶದ ಒಂದಲ್ಲ ಒಂದು ಭಾಗದಲ್ಲಿ ಹೆಣ್ಣು ಮಕ್ಕಳ ಮೇಲೆ ನಿರಂತರ ಅತ್ಯಾಚಾರ ನಡಿತಾನೇ ಇದೆ. ಅದು ಮಗುವಿರಲಿ, ಹುಡುಗಿಯಿರಲಿ, ಹೆಂಗಸಿರಲಿ. ಜೀವವೊಂದು ಹೆಣ್ಣಾಗಿರುವುದಕ್ಕೆ ನಮ್ಮ ದೇಶದ ಪುರುಷ ಸಮಾಜ ನೀಡುತ್ತಿರುವ ನಿರಂತರ ಬಹುಮಾನವಿದೇನಾ ಅಂತ ಅನಿಸುತ್ತಾ ಇದೆ.?



ಮನೇಲಿ ಅಜ್ಜಿ, ಅಮ್ಮ, ಅಕ್ಕ, ತಂಗಿ, ಹೆಂಡತಿ ಇರುವವರು , ದೊಡ್ಡ ದೊಡ್ಡ ಸ್ಥಾನದಲ್ಲಿ ಇರುವವರು, ಇನ್ನು ಅಲ್ಲಿ ಇಲ್ಲಿ ಅಲೆದಾಡೋ ಪುಂಡ ಪೋಕಿರಿಗಳು ಹೀಗೆ ಎಲ್ಲರು ಹೆಣ್ಣನ್ನೋ   ಜೀವವನ್ನ ಹರಿದು ತಿನ್ನುತ್ತಿದ್ದಾರೆ, ಅವಳ ಜೀವಕ್ಕೆ ಮತ್ತು ಜೀವನಕ್ಕೆ ಬೆಲೆಯೆ  ಇಲ್ಲದ ಹಾಗೆ ಮಾಡಿಬಿಟ್ಟಿದ್ದಾರೆ. ದೇಶದಲ್ಲಿ ಹೆಣ್ಣನ್ನು ದೇವರು ಅಂತ ಪೂಜಸುತ್ತಾರೆ ಅದೇ  ದೇಶದಲ್ಲಿ ಪರಿಯ ಅತ್ಯಾಚಾರಗಳು  ಅಪರಿಮಿತವಾಗಿ ನಡಿತಾ ಇವೆ. BBC ಯವರ ಸರ್ವೇ ಪ್ರಕಾರ ಅವರು ಹೇಳೋದೇನು ಗೊತ್ತೆ "India A Dangerous Place to Be a Woman BBC documentary 2013" (ಸಾಧ್ಯವಾದರೆ  ಯುಟ್ಯೂಬನಲ್ಲಿ ವೀಡಿಯೊ ನೋಡಿ. ನಿಮಗೆ ಗೊತ್ತಿಲ್ಲದೇ ನಿಮ್ಮ ಕಣ್ಣಲ್ಲಿ ಕಂಬನಿ ಒಸರುತ್ತೆ).



ಈಗಿನ ನವಯುಗದಲ್ಲಿ ಹೆಣ್ಣು ಎಲ್ಲ ಕ್ಷೇತ್ರದಲ್ಲೂ ಮುಂದಿದ್ದಾಳೆ ಅಂತ ಹೆಮ್ಮೆ ಪಡುವುದು ಒಂದು ಮುಖವಾದರೆ ಇನ್ನೊಂದೆಡೆ ಅವಳು ತನ್ನನ್ನು ಕೆಟ್ಟ  ಕಾಮುಕಿಗಳಿಂದ  ರಕ್ಷಿಸಿಕೊಳ್ಳಲು  ಪರದಾಡುತ್ತಲೇ ಇದ್ದಾಳೆ, ಅವಳ ಮೇಲೆ ನಿರಂತರ ಅತ್ಯಾಚಾರ ನಡಿತಾನೆ ಇದೆ. ಯಾಕೆ ಪರಿ ಅತ್ಯಾಚಾರ ದೇಶದಲ್ಲಿ ಭುಗಿಲೆದ್ದಿದೆ? ಅದರಲ್ಲಿ ಬೆಳಕಿಗೆ ಬರೋ ಪ್ರಕರಣಗಳು ಬಹಳ ಕಡಿಮೆ, ಇನ್ನು ಎಷ್ಟೋ ಪ್ರಕರಣಗಳು ಮುಂದಿನ ಭವಿಷ್ಯದ ಭಯಕ್ಕೋ, ಸಮಾಜದಲ್ಲಿಯ ಮರ್ಯಾದೆಗೋ ಹೆದರಿ ಬೆಳಕಿಗೆ ಬರುವುದಿಲ್ಲ. ನಮ್ಮ ದೇಶದಲ್ಲಿ ಕೆಲಸಕ್ಕೆ ಬಾರದೆ ಇರೋ ಕಾನೂನುಗಳು ಎಷ್ಟೋ ಇವೆ. ಪರಿಯ ಅತ್ಯಾಚಾರಗಳನ್ನ  ತಡೆಯಲು ಕಠಿಣ ಕಾನೂನುಗಳನ್ನ ತರುವುದಕ್ಕೆ ಸರ್ಕಾರಕ್ಕೆ ಏನಾಗಿದೆ ಅಪರಾಧಿಗಳಿಗೆ ಕಠಿಣಾಥಿ-ಕಠಿಣ ಕಾನೂನುಗಳು ಜಾರಿಗೆ ಬರಬೇಕು. ಆಗಲೇ ಯಾರು ಇಂತ ನೀಚ ಕೆಲಸ ಮಾಡೋಕೆ ಹೋಗಲ್ಲ. ಇಂಥವರಿಗೆ ಮರಣ ದಂಡನೆ ಕೊಟ್ರು ತಪ್ಪಿಲ್ಲ.



ಅಂತರಜಾಲದಲ್ಲಿ ಭಾರತದ ಸ್ತ್ರೀ ಶೋಷಣೆ ಬಗ್ಗೆ  ಅಂಕಿ ಅಂಶ ನೋಡ್ತಾ ಇದ್ರೆ ನಿಜವಾಗಲು ಇದೇನಾ ನಮ್ಮ ದೇಶ ಎಂದು ಆಶ್ಚರ್ಯವಾಗುತ್ತೆ. ನೆನಪಿರಲಿ   ಸಮಯಕ್ಕೆ  ನಾವು ಮತ್ತೆ ನಮ್ಮ ಪರಿವಾರ ಸುರಕ್ಷಿತವಾಗಿರಬಹುದು ಆದರೆ ಇದು ಶಾಶ್ವತ ಸುರಕ್ಷತೆ ಅಂತ ಹೇಳೋಕೆ ಆಗದಂತೆ ದೇಶದಲ್ಲಿ ಅತ್ಯಾಚಾರದ ಮಟ್ಟ ಏರಿಕೆಯಾಗಿದೆ. ಅತ್ಯಾಚಾರಗಳು ನಡೆದಾಗ ಎಲ್ಲ  ಕಡೆ ಇಂತ ಬರಹಗಳು, ಇದರ ಬಗ್ಗೆ ಮಾತುಗಳು ನಡಿಯುತ್ತವೆ, ಸ್ವಲ್ಪ ದಿನದ  ನಂತರ  ಅದೆಲ್ಲ  ಮರೆತುಬಿಡುತ್ತೇವೆ. ಆದ್ರೆ ಇಂತಹ ವಿಷಯಗಳು ಮುಂದೆಂದು ಘಟಿಸದಂತೆ / ಇಂತ ನೀಚ ಕೆಲಸ ಮುಂದೆ ಯಾವತ್ತು ಯಾರು  ಮಾಡದಂತೆ ತಡೆಯಲು  ಮತ್ತು ದೇಶದ  ಹೆಣ್ಣು ಮಕ್ಕಳ ಸುರಕ್ಷತೆಯ  ದೃಷ್ಟಿಯಿಂದ  ಕಠಿಣ ಕಾನೂನುಗಳು ಜಾರಿಗೆ ಬರಲೇಬೇಕು. ತಪಿಸ್ಥರು ಯಾರೇ ಆಗಿರಲಿ ಮುಲಾಜಿಲ್ಲದೆ ಶಿಕ್ಷೆ ಕೊಡಬೇಕು ಆಗಲೇ ದೇಶ ಮತ್ತು ದೇಶದ ಹೆಣ್ಣು ಮಕ್ಕಳು ಸುರಕ್ಷಿತವಾಗಿರಬಹುದು.  



ಕೊನೆಯದಾಗಿ  ನಾವು ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿ ತೂಗುವುದು ಸರಿಯಲ್ಲ, ನಮ್ಮ ನಡುವೆ ಎಷ್ಟೋ ಒಳ್ಳೆಯವರು, ಹೃದಯವಂತರು, ಸಮಾನ ಮನಸ್ಕರು ನಮ್ಮ ದೇಶದದಲ್ಲಿ  ಇದ್ದಾರೆ, ಸ್ತ್ರೀಯನ್ನ ದೇವತೆ ಹಾಗೆ ಗೌರವಿಸೋರು ಇದ್ದಾರೆ. ಗಂಡಸರು ಅವಳನ್ನು ಗೌರವಿಸುವುದರ ಜೊತೆಗೆ ಅವಳ ಸುರಕ್ಷತೆಯ ಕಡೆಗೂ ಆದ್ಯತೆ ಕೊಡಬೇಕು.ಇದು ನಮ್ಮೆಲ್ಲರ ಕರ್ತ್ಯವ್ಯ ಕೂಡ ಆಗಿದೆ

ನಮ್ಮ ದೇಶ

ನಮಗೆ ಯಾವುದೇ ಜಾತಿ ಅಥವಾ ಜನಾಂಗದ ಮೇಲೆ ಕೆಟ್ಟು ಭಾವನೆ ಇಲ್ಲಾ.. ನಮ್ಮ ದೇಶದಲ್ಲಿ ಎಲ್ಲರೂ ಸಮಾನ ಅನ್ನೋ ಸಂಸ್ಕಾರ ಇಟ್ಕೋ೦ಡು ಬೆಳೆದವರು ನಾವೂ.. 

೨೦೦ ವರುಷಗಳ ಹಿಂದೆ ನಮ್ಮ ಭಾರತವನ್ನಾಳಿದ ಮಹಾರಾಜರು ತಮ್ಮ ತಮ್ಮ ರಾಜ ಸಂಸ್ಥಾನಗಳನ್ನೂ ಉಳಿಸಿಲಿಕ್ಕೋ ಅಥವಾ ಬೆಳಿಸಲಿಕ್ಕೆ ಹೋಗಿ ನಮ್ಮ ದೇಶವನ್ನು ಗುಲಾಮಗಿರಿಗೆ ತಂದಿಟ್ಟು, ಬ್ರಿಟಿಷರ ಆಡಳಿತ ನೋಡಿ ಬಾಯಿ ಬಡಕೊಂಡ್ರು, ತದನಂತರದ ಕಥೆ ನಿಮಗೆಲ್ಲ ಗೊತ್ತೇ ಇದೆ. 

ಅದೇ ರೀತಿ ನಮ್ಮ ಹೊಲಸು ರಾಜಕಾರಣಿಗಳು ತಮಗೆ ಬೇಕಾದ ಜನಾಂಗದವರ ವೋಟು ಗಿಟ್ಟಿಸಿಕೊಳ್ಳಲಿಕ್ಕೆ ಏನೆಲ್ಲಾ ರಾಜಕಾರಣ ಮಾಡ್ತಾ ಇದ್ದಾರೆ.ನಮ್ಮ ದೇಶದಲ್ಲಿ ಹೊಲಸು ರಾಜಕಾರಣಿಗಳಿ೦ದ ಏನೆಲ್ಲಾ ಪರಿಸ್ಥಿತಿ ಎದುರಾಗುತ್ತೆ ಅಂತಾ ಯೋಚನೆ ಮಾಡ್ಕೊಂಡ್ರೆ ಅಸಹ್ಯ ಅಗುತ್ತೆ.

ನಮ್ಮ ಸರ್ಕಾರದವರು ಬಡವರಿಗೋಸ್ಕರ ಅನ್ನ ಭಾಗ್ಯ ಯೋಜನೆ ತಂದಿದ್ದಾರೆ. ಅದು ಒಳ್ಳೆಯದೋ ಕೆಟ್ಟದ್ದೋ ಗೊತ್ತಿಲ್ಲ!! ಆದ್ರೆ ಸರ್ಕಾರ ಬಡವರಿಗೆ ನಿಮ್ಮ ಗತಿನೇ ಇಷ್ಟು, ನಾವು ಕೊಟ್ಟಿದ್ದು ತಿಂದು ನಮ್ಮ ಪಾರ್ಟಿ ಗೆ ವೋಟು ಹಾಕಿ ಅನ್ನೋ ತರಹ ಆಗಿ ಬಿಟ್ಟಿದೆ. ಅನ್ನ ಭಾಗ್ಯ ಯೋಜನೆ ಬಡವರನ್ನ ಇನ್ನಷ್ಟು ಪರಾವಲಂಬಿಗಳಾಗಿ ಮಾಡ್ತಾ ಇದೆ. ಅದರ ಬದಲಿಗೆ ಸರ್ಕಾರ ಅದೇ ಹಣದಲ್ಲಿ ಸಮಾಜವನ್ನ ಸುಧಾರಿಸಿ, ಅದೇ ಬಡಜನರಿಗೆ ಕೆಲಸ ಕೊಟ್ಟರೆ, ಅವನಿಗೆ ತನ್ನದೇ ಆದ ದುಡ್ಡಿನಲ್ಲಿ ಊಟ ಮಾಡುವ ಆತ್ಮಗೌರವ, ತೃಪ್ತಿ ಸಿಗುತ್ತೆ ಅಂತಹ ಪರಿಜ್ಞಾನ ಇಲ್ಲ ನಮ್ಮ ಸರ್ಕಾರದವರಿಗೆ.

ಸಮಾಜ ಸುಧಾರಣೆ ಬೇಕಿಲ್ಲ ಈಗಿನ ರಾಜಕರಿಣಿಗಳಿಗೆ !! ಅವರಿಗೆ ಬೇಕಾಗಿರುವುದು ಜಾತಿ, ಬಡತನ , ಕೀಳರಿಮೆಯನ್ನ ಎತ್ತಿ ಕಟ್ಟಿ ತಮಗೆ ಬೇಕಾದ ಹಾಗೆ ಆಡಳಿತ ಮಾಡೋದು. ಅವರಿಗೆ ತಮ್ಮ ಸ್ವಾರ್ಥ ಈಡೇರಿಸಿ ಕೊಳ್ಳೋದರಲ್ಲಿ ತಮ್ಮ ಸಮಯ ಕಳೆದು ಬಿಡುತ್ತಾರೆ..

ನಮ್ಮ ಸರ್ಕಾರಗಳು ನಾವು ಕಟ್ಟಿರೋ ತೆರಿಗೆಯನ್ನ " ಯಾರದೋ ದುಡ್ಡುನಲ್ಲಿ ಎಲ್ಲಮ್ಮನ ಜಾತ್ರೆ" ಮಾಡಿದ ಹಾಗಿದೆ. ಬೆಕ್ಕಿಗೆ ಘಂಟೆ ಕಟ್ಟುವವರೇ ಇಲ್ಲದಾಗಿ ಹೊಗಿದೆ. ನಾವು ಸರ್ಕಾರಕ್ಕೆ ಕಟ್ಟಿದ ಹಣದಲ್ಲಿ ನಮಗೇನು ಸಿಗುತ್ತೆ ಅಂತ ಯೋಚಿಸಿದರೆ ಒಂದು ದೊಡ್ಡದಾದ "ಶೂನ್ಯ" ನೆನಪಿಗೆ ಬರ್ತಾ ಇದೆ.

ಇದೆಲ್ಲದರಿಂದ ನಮಗೆ ನಮ್ಮ ದೇಶ, ನಮ್ಮ ಜನ, ನಮ್ಮ ನಾಡು ಅನ್ನೋ ಪ್ರೀತಿ ಎಲ್ಲೊ ಕಳೆದು ಹೋದ ಹಾಗೆ ಅನಿಸ್ತಾ ಇದೆ.

ಇದೆ ರೀತಿ ಮುಂದುವರೆದರೆ ನಮ್ಮ ದೇಶವನ್ನ ಬಡತನ ಮುಕ್ತ ರಾಷ್ಟ್ರ ಮಾಡಲಿಕ್ಕೆ ಮತ್ತೆ ಎಷ್ಟು ವರುಷಗಳು ಹಿಡಿಯುತ್ತೋ ಗೊತ್ತಿಲ್ಲಾ.

ಜೈ ಹಿಂದ !!