ಅತ್ಯಾಚಾರದ ಸುದ್ದಿ ಕೇಳಿದರೆ ಸಾಕು, ಮನಸ್ಸಿಗೆ ಬೇಜಾರು ಮತ್ತೆ ನೋವುಂಟಾಗುತ್ತದೆ.. ನಾವೂ ನಿಜವಾಗಲೂ ಭಾರತ ಮಾತೆಯ ಮಡಿಲಲ್ಲಿ ಬೆಳೆದ ಹೆಣ್ಣು ಮಕ್ಕಳಿಗೆ, ನಮ್ಮ ದೇಶದ ಸಮಾಜ ಕೊಡುತ್ತಿರುವ ಗೌರವದ ಬಗ್ಗೆ ಮನಸ್ಸಿನಲ್ಲಿ ಹೇಸಿಗೆ ಮೂಡುತ್ತಾ ಇದೆ. ಎಲ್ಲರ ಮನಸ್ಸಿನ ಮೂಲೆಯಲ್ಲಿ ಹತಾಶೆ ಮೂಡುತ್ತಲೆ ಇದೆ, ಯಾಕೆ ಅಂದ್ರೆ ದಿನದಿಂದ ದಿನಕ್ಕೆ ಸ್ತ್ರೀ ಅತ್ಯಾಚಾರದ ಪ್ರಕರಣಗಳು ಜಾಸ್ತಿ ಆಗ್ತಾನೆ ಇವೆ ಇದನ್ನ ತಡಿಲಿಕ್ಕೆ ಆಗೋದೇ ಇಲ್ವಾ ? ಅಂತ ಅನಿಸ್ತಾ ಇದೆ. ಮಠಪತಿಗಳಿಂದ ಹಿಡಿದು ಮಂತ್ರಿಯವರೆಗೆ, ನವಯುವಕರಿಂದ ಹಿಡಿದು ಮುದುಕರು, ನಡೆಸುವ ಈ ಅತ್ಯಾಚಾರ ಎಲ್ಲ ಸ್ಥರದಲ್ಲಿ ಎಲ್ಲಾ ಕಡೆಯಲ್ಲೂ ನಡೀತಾನೆ ಇದೆ!!
ಇಂತಹ ನೀಚರ ಬಗ್ಗೆ ಒಳ್ಳೆಯ ಮನಸ್ಕರಲ್ಲೂ ಆಕ್ರೋಶ ಮೂಡುವುದರಲ್ಲಿ ಸಂದೇಹವೇ ಇಲ್ಲದಾಗಿ ಹೋಗಿದೆ. ಪ್ರತಿ ದಿನ ದೇಶದ ಒಂದಲ್ಲ ಒಂದು ಭಾಗದಲ್ಲಿ ಹೆಣ್ಣು ಮಕ್ಕಳ ಮೇಲೆ ನಿರಂತರ ಅತ್ಯಾಚಾರ ನಡಿತಾನೇ ಇದೆ. ಅದು ಮಗುವಿರಲಿ, ಹುಡುಗಿಯಿರಲಿ, ಹೆಂಗಸಿರಲಿ. ಆ ಜೀವವೊಂದು ಹೆಣ್ಣಾಗಿರುವುದಕ್ಕೆ ನಮ್ಮ ದೇಶದ ಪುರುಷ ಸಮಾಜ ನೀಡುತ್ತಿರುವ ನಿರಂತರ ಬಹುಮಾನವಿದೇನಾ ಅಂತ ಅನಿಸುತ್ತಾ ಇದೆ.?
ಮನೇಲಿ ಅಜ್ಜಿ, ಅಮ್ಮ, ಅಕ್ಕ, ತಂಗಿ, ಹೆಂಡತಿ ಇರುವವರು , ದೊಡ್ಡ ದೊಡ್ಡ ಸ್ಥಾನದಲ್ಲಿ ಇರುವವರು, ಇನ್ನು ಅಲ್ಲಿ ಇಲ್ಲಿ ಅಲೆದಾಡೋ ಪುಂಡ ಪೋಕಿರಿಗಳು ಹೀಗೆ ಎಲ್ಲರು ಹೆಣ್ಣನ್ನೋ ಆ ಜೀವವನ್ನ ಹರಿದು ತಿನ್ನುತ್ತಿದ್ದಾರೆ, ಅವಳ ಜೀವಕ್ಕೆ ಮತ್ತು ಜೀವನಕ್ಕೆ ಬೆಲೆಯೆ ಇಲ್ಲದ ಹಾಗೆ ಮಾಡಿಬಿಟ್ಟಿದ್ದಾರೆ. ಈ ದೇಶದಲ್ಲಿ ಹೆಣ್ಣನ್ನು ದೇವರು ಅಂತ ಪೂಜಸುತ್ತಾರೆ ಅದೇ ದೇಶದಲ್ಲಿ ಈ ಪರಿಯ ಅತ್ಯಾಚಾರಗಳು ಅಪರಿಮಿತವಾಗಿ ನಡಿತಾ ಇವೆ. BBC ಯವರ ಸರ್ವೇ ಪ್ರಕಾರ ಅವರು ಹೇಳೋದೇನು ಗೊತ್ತೆ
"India A Dangerous Place to Be a Woman BBC documentary 2013" (ಸಾಧ್ಯವಾದರೆ ಯುಟ್ಯೂಬನಲ್ಲಿ ಈ ವೀಡಿಯೊ ನೋಡಿ. ನಿಮಗೆ ಗೊತ್ತಿಲ್ಲದೇ ನಿಮ್ಮ ಕಣ್ಣಲ್ಲಿ ಕಂಬನಿ ಒಸರುತ್ತೆ).
ಈಗಿನ ನವಯುಗದಲ್ಲಿ ಹೆಣ್ಣು ಎಲ್ಲ ಕ್ಷೇತ್ರದಲ್ಲೂ ಮುಂದಿದ್ದಾಳೆ ಅಂತ ಹೆಮ್ಮೆ ಪಡುವುದು ಒಂದು ಮುಖವಾದರೆ ಇನ್ನೊಂದೆಡೆ ಅವಳು ತನ್ನನ್ನು ಕೆಟ್ಟ ಕಾಮುಕಿಗಳಿಂದ ರಕ್ಷಿಸಿಕೊಳ್ಳಲು ಪರದಾಡುತ್ತಲೇ ಇದ್ದಾಳೆ, ಅವಳ ಮೇಲೆ ನಿರಂತರ ಅತ್ಯಾಚಾರ ನಡಿತಾನೆ ಇದೆ. ಯಾಕೆ ಈ ಪರಿ ಅತ್ಯಾಚಾರ ದೇಶದಲ್ಲಿ ಭುಗಿಲೆದ್ದಿದೆ? ಅದರಲ್ಲಿ ಬೆಳಕಿಗೆ ಬರೋ ಪ್ರಕರಣಗಳು ಬಹಳ ಕಡಿಮೆ, ಇನ್ನು ಎಷ್ಟೋ ಪ್ರಕರಣಗಳು ಮುಂದಿನ ಭವಿಷ್ಯದ ಭಯಕ್ಕೋ, ಸಮಾಜದಲ್ಲಿಯ ಮರ್ಯಾದೆಗೋ ಹೆದರಿ ಬೆಳಕಿಗೆ ಬರುವುದಿಲ್ಲ. ನಮ್ಮ ದೇಶದಲ್ಲಿ ಕೆಲಸಕ್ಕೆ ಬಾರದೆ ಇರೋ ಕಾನೂನುಗಳು ಎಷ್ಟೋ ಇವೆ. ಈ ಪರಿಯ ಅತ್ಯಾಚಾರಗಳನ್ನ ತಡೆಯಲು ಕಠಿಣ ಕಾನೂನುಗಳನ್ನ ತರುವುದಕ್ಕೆ ಸರ್ಕಾರಕ್ಕೆ ಏನಾಗಿದೆ ? ಅಪರಾಧಿಗಳಿಗೆ ಕಠಿಣಾಥಿ-ಕಠಿಣ ಕಾನೂನುಗಳು ಜಾರಿಗೆ ಬರಬೇಕು. ಆಗಲೇ ಯಾರು ಇಂತ ನೀಚ ಕೆಲಸ ಮಾಡೋಕೆ ಹೋಗಲ್ಲ. ಇಂಥವರಿಗೆ ಮರಣ ದಂಡನೆ ಕೊಟ್ರು ತಪ್ಪಿಲ್ಲ.
ಅಂತರಜಾಲದಲ್ಲಿ ಭಾರತದ ಸ್ತ್ರೀ ಶೋಷಣೆ ಬಗ್ಗೆ ಅಂಕಿ ಅಂಶ ನೋಡ್ತಾ ಇದ್ರೆ ನಿಜವಾಗಲು ಇದೇನಾ ನಮ್ಮ ದೇಶ ಎಂದು ಆಶ್ಚರ್ಯವಾಗುತ್ತೆ. ನೆನಪಿರಲಿ ಈ ಸಮಯಕ್ಕೆ ನಾವು ಮತ್ತೆ ನಮ್ಮ ಪರಿವಾರ ಸುರಕ್ಷಿತವಾಗಿರಬಹುದು ಆದರೆ ಇದು ಶಾಶ್ವತ ಸುರಕ್ಷತೆ ಅಂತ ಹೇಳೋಕೆ ಆಗದಂತೆ ದೇಶದಲ್ಲಿ ಅತ್ಯಾಚಾರದ ಮಟ್ಟ ಏರಿಕೆಯಾಗಿದೆ. ಅತ್ಯಾಚಾರಗಳು ನಡೆದಾಗ ಎಲ್ಲ ಕಡೆ ಇಂತ ಬರಹಗಳು, ಇದರ ಬಗ್ಗೆ ಮಾತುಗಳು ನಡಿಯುತ್ತವೆ, ಸ್ವಲ್ಪ ದಿನದ ನಂತರ ಅದೆಲ್ಲ ಮರೆತುಬಿಡುತ್ತೇವೆ. ಆದ್ರೆ ಇಂತಹ ವಿಷಯಗಳು ಮುಂದೆಂದು ಘಟಿಸದಂತೆ / ಇಂತ ನೀಚ ಕೆಲಸ ಮುಂದೆ ಯಾವತ್ತು ಯಾರು ಮಾಡದಂತೆ ತಡೆಯಲು ಮತ್ತು ದೇಶದ ಹೆಣ್ಣು ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಕಠಿಣ ಕಾನೂನುಗಳು ಜಾರಿಗೆ ಬರಲೇಬೇಕು. ತಪಿಸ್ಥರು ಯಾರೇ ಆಗಿರಲಿ ಮುಲಾಜಿಲ್ಲದೆ ಶಿಕ್ಷೆ ಕೊಡಬೇಕು ಆಗಲೇ ದೇಶ ಮತ್ತು ದೇಶದ ಹೆಣ್ಣು ಮಕ್ಕಳು ಸುರಕ್ಷಿತವಾಗಿರಬಹುದು.
ಕೊನೆಯದಾಗಿ ನಾವು ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿ ತೂಗುವುದು ಸರಿಯಲ್ಲ, ನಮ್ಮ ನಡುವೆ ಎಷ್ಟೋ ಒಳ್ಳೆಯವರು, ಹೃದಯವಂತರು, ಸಮಾನ ಮನಸ್ಕರು ನಮ್ಮ ದೇಶದದಲ್ಲಿ ಇದ್ದಾರೆ, ಸ್ತ್ರೀಯನ್ನ ದೇವತೆ ಹಾಗೆ ಗೌರವಿಸೋರು ಇದ್ದಾರೆ. ಗಂಡಸರು ಅವಳನ್ನು ಗೌರವಿಸುವುದರ ಜೊತೆಗೆ ಅವಳ ಸುರಕ್ಷತೆಯ ಕಡೆಗೂ ಆದ್ಯತೆ ಕೊಡಬೇಕು.ಇದು ನಮ್ಮೆಲ್ಲರ ಕರ್ತ್ಯವ್ಯ ಕೂಡ ಆಗಿದೆ.